Wednesday 15 February 2023

ನಡಿಗೆ ಉತ್ತಮ ಅಭ್ಯಾಸ walk daily

 ನಡಿಗೆ ಉತ್ತಮ ಅಭ್ಯಾಸ- ವೈಚಾರಿಕ ಲೇಖನ


ಗೂಗಲ್ ಚಿತ್ರಕೃಪೆ.

      ನಡಿಗೆ ಎನ್ನುವುದು ಒಂದು ಉತ್ತಮ ವ್ಯಾಯಾಮ. ಮಳೆ‌ಚಳಿ ಬೇಸಿಗೆ ಎಂಬ ಕಾಲದ ಹಂಗಿಲ್ಲದೇ ಸಂಜೆ ಅಥವಾ ಮುಂಜಾನೆ ನಡೆಯಬಹುದು. ಶುದ್ಧ ಗಾಳಿ, ಸೂರ್ಯನ ಬೆಳಕು, ವಿಟಮಿನ್ ಡಿ ಹೇರಳವಾಗಿ ಮುಂಜಾನೆ ಸಿಗುವ ಕಾರಣ ಅದುವೇ ಸೂಕ್ತವೆನಿಸಿದೆ. ಇನ್ನು ಚಳಿಗಾಲದಲ್ಲಿ ಬೆಳಿಗ್ಗೆ ನಡೆಯುವುದು ಎಂದರೆ ಎಲ್ಲಿಲ್ಲದ ಕೆಲವರಿಗೆ ಆಸಕ್ತಿ. ವಾಕಿಂಗ್ ಗೆ ಹೋಗುವವರು, ಜಾಗಿಂಗ್ ಗೆ ಹೋಗುವವರು ಕಿವಿಯನ್ನು ಹಾಡನ್ನು ಕೇಳಿಸಿಕೊಳ್ಳುತ್ತಾ ಅದರ ತಾಳಕ್ಕೆ ತಕ್ಕಂತೆ ಜಾಗಿಂಗ್ ಮಾಡುವಾಗ ಮನಸ್ಸು ಪ್ರಫುಲ್ಲಗೊಳ್ಳುತ್ತದೆ. ಮುಂಜಾನೆಯ ಶುದ್ಧ ಗಾಳಿ ಆಮ್ಲಜನಕವನ್ನು ಉಸಿರಾಡುವಾಗ ಶ್ವಾಸಕೋಶವೂ ಅರಳುತ್ತದೆ. ಹೆಪ್ಪುಗಟ್ಟಿದ ರಕ್ತವೂ ಬಿಸಿಯಾಗೀ ಸರಾಗವಾಗಿ ನಾಳದಲ್ಲಿ ಸಂಚರಿಸುವಂತಾಗುತ್ತದೆ. ಹೃದಯವೂ ಸುರಕ್ಷಿತವಾಗಿರುತ್ತದೆ.


ಮುಂಜಾನೆಯ ಸುಪ್ರಭಾತದ ಜೊತೆಗೆ ಆ ಹಕ್ಕಿಗಳ ಕಲರವ, ಕಾಳು ಕಸ ಕಡ್ಡಿಗಳ ಹೆಕ್ಕಿ ತಿನ್ನುವುದನ್ನು ನೋಡುವುದೇ ಚಂದ. ಅವುಗಳ‌ ಜಗಳ‌ ಚಲ್ಲಾಟ ಮುದ್ದಾಟ ಮನಸ್ಸಿಗೂ ಮುದ ನೀಡುತ್ತದೆ. ಇನ್ನು ನಾಯಿ ಅಳಿಲು ಹಸುಕರುಗಳನ್ನು ನಾವು ಕಾಣಬಹುದಾಗಿದೆ. ಸೂರ್ಯನ ಎಳೆಬಿಸಿಲಿಗೆ ಮೈ ಅರಳಿಸಿ ನಿಲ್ಲುವ ಬಗೆಬಗೆಯ ಸುಮಗಳ ರಾಶಿ ಮಧುವ ಹೀರಲು ಬರುವ ದುಂಬಿಗಳ ಗೋಗರೆಯುವಿಕೆ... ನೋಡಲೂ ಅಕ್ಷಿಗಳಿಗೊಂದು ಹಬ್ಬ.


ಇನ್ನು ಘಮಘಮಿಸುವ ಮಲ್ಲಿಗೆ ಮಾಲೆ, ದೇವಾಲಯದ ಪಚ್ಚ ಕರ್ಪೂರ, ಗೋಪಿ ಚಂದನ, ಊದುಬತ್ತಿ, ಸಂಪಿಗೆ ಸೇವಂತಿಗೆ ಪರಿಮಳ ಭಕ್ತಿಪರವಶರಾಗಿ ದೇವರು ಇದ್ದಾನೆ ಎಂಬ ನಂಬಿಕೆಯನ್ನು  ಇಮ್ಮಡಿಗೊಳಿಸುತ್ತದೆ. ಸಾತ್ವಿಕ ಆಧ್ಯಾತ್ಮಿಕ ಭಾವಕ್ಕೆ ಬೆಲೆಕಟ್ಟಲಾದೀತೆ?? ಮನೆಯಂಗಳ, ರಸ್ತೆ ದೇವಾಲಯದ ಮುಂಬಾಗ ನೀರು ಚೆಲ್ಲಿ ಗುಡಿಸಿ ಸ್ವಚ್ಛ ಮಾಡಿ ರಂಗೋಲಿ ಬಿಡಿಸುವ ಮಹಿಳೆಯರ ಕಂಡರೆ ಹೆಮ್ಮೆ  ಎನಿಸುವುದು. ನಮ್ಮ ಸಂಸ್ಕೃತಿಯ ಮರೆಯಲಾದೀತೆ??


ಅದರ ಜೊತೆಜೊತೆಗೆ ವಾಕಿಂಗ್ ಹೋಗುವಾಗ ಮೂಗಿಗೆ ಬಡಿಯುವ ತಮ್ಮತ್ತ ಸೆಳೆಯುವ ಇಡ್ಲಿ ವಡಾ ಸಾಂಬಾರ್ ಮಸಾಲ ದೋಸೆ ಟೋಮಾಟೋ ರೈಸ್ ಘಮಘಮ ಅಲ್ಲೇ ನಿಂತು ಬೆಳಿಗ್ಗೆ ತಾಜಾ ಉಪಹಾರವನ್ನು ಇಲ್ಲೇ ಸವಿದು ಬಿಡೋಣ ಎಂದೆನಿಸಿ ಕಾಲಿಗೆ ಬ್ರೇಕ್ ಹಾಕಿಬಿಡುತ್ತದೆ. ಮುಂಜಾನೆಯ ಉಪಾಹಾರವನ್ನು ಅದೂ ಕೂಡ ಲಘು ಉಪಹಾರವನ್ನು ಹೊತ್ತಿಗೆ ಸರಿಯಾಗಿ ಸವಿಯದೇ ಇರಲಾದೀತೆ?? ಆರೋಗ್ಯವೇ ಭಾಗ್ಯ ಎಂಬುದು ಸತ್ಯತಾನೆ.?? ಮುಂಜಾನೆಯ ಉಪಹಾರವನ್ನು ಎಂದಿಗೂ ಹೊತ್ತು ಮೀರಿ ಸೇವಿಸಬಾರದು.


ಇನ್ನು ಸ್ನೇಹಿತರ ಬಳಗ:: ಬೆಳಿಗ್ಗೆ ಪ್ರತಿದಿನ ವಾಕಿಂಗ್ ಗೆ ಬರುವ ಅಪರಿಚಿತರು ಒಂದು ನಗುವಿನ ವಿನಿಮಯದ ಮೂಲಕ  ದಿನಗಳು ಕಳೆದಂತೆ ಸ್ನೇಹಿತರಾಗಿ ಬಿಡುತ್ತಾರೆ. ಅವರ ಬಗೆಗೆ ಕಷ್ಟ ನಷ್ಟು ಓದು ಉದ್ಯೋಗ ರಾಜಕೀಯ ಕ್ರೀಡಾ ಮಾಹಿತಿಗಳ ವಿನಿಮಯ ಮಾಡಿಕೊಂಡು ತಾವೂ ವಿಷಯಗಳ ಸಂಗ್ರಹಿಸಿ ಇತರರಿಗೂ ಹಂಚಿ ಬುದ್ಧಿಯನ್ನು ಚುರುಕಾಗಿಸಿಕೊಳ್ಳುತ್ತಾರೆ. ಚಿಂತನೆಗೆ ಹಚ್ಚುವ ವಿಚಾರಗಳು ಬೇಡವೆಂದರೆ ಆದೀತೆ??


ಆರೋಗ್ಯದ ಹಿತ ದೃಷ್ಟಿಯಿಂದ::: ಈ ನಡಿಗೆ ಜಾಗಿಂಗ್ ಪ್ರತಿದಿನ ಇಪ್ಪತ್ತು ನಿಮಿಷವಾದರು ಮಾಡಲೇಬೇಕು.  ಜಿಮ್ ಗೆ ಹೋಗಿ ವರ್ಕೌಟ್ ಮಾಡಿ ಬೆವರು ಇಳಿಸುವುದು ಎಲ್ಲರಿಗೂ ಸಾಧ್ಯವಾಗದು. ಅಂತವರು ನಡಿಗೆಯಲ್ಲಿ ತೊಡಗಿಸಿಕೊಳ್ಳಿ. ಚೆನ್ನಾಗಿ ನೀರು ಸೇವಿಸಿ. ಪ್ರತಿದಿನ ಮುಂಜಾನೆ ಮತ್ತು  ಸಂಜೆ ನಡೆಯಿರಿ. ರಕ್ತ ಸಂಚಾರ ಸುಗಮವಾಗಿ ಸಾಗಿ ಹೃದಯವನ್ನು ಕಾಪಾಡಿಕೊಳ್ಳಬಹುದು. 


- ಸಿಂಧು ಭಾರ್ಗವ ಬೆಂಗಳೂರು.

ವೈಚಾರಿಕ ಲೇಖನ.

No comments:

Post a Comment